ರಾಯಬಾಗ: ತಾಲೂಕಿನ ಮೊರಬ ಗ್ರಾಮದಲ್ಲಿ ಅಬಕಾರಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಮಾರಾಟಕ್ಕಾಗಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 49 ಲೀಟರ್ ಕಳ್ಳಭಟ್ಟಿ ಸರಾಯಿಯನ್ನು ವಶಪಡಿಸಿಕೊಂಡು, ಓರ್ವ ಆರೋಪಿಯನ್ನು ಬಂಧಿಸಲಾಗಿದೆ.
ಡಾ. ವೈ. ಮಂಜುನಾಥ, ಅಬಕಾರಿ ಅಪರ ಆಯುಕ್ತರು (ಅಪರಾಧ), ಕೇಂದ್ರಸ್ಥಾನ ಬೆಳಗಾವಿ ಅವರ ಮಾರ್ಗದರ್ಶನದಲ್ಲಿ, ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತರಾದ ಎಫ್.ಎಚ್. ಚಲವಾದಿ ಹಾಗೂ ಬೆಳಗಾವಿ ಉತ್ತರ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾದ ಸ್ವಪ್ನಾ ಆರ್.ಎಸ್. ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು.
ಮೊರಬ ಗ್ರಾಮದ ಇಂದ್ರಾನಗರದಲ್ಲಿರುವ ಶಂಭು ಭರಮಾ ಗಸ್ತಿ ಎಂಬಾತನ ಮನೆಯಲ್ಲಿ ಅಬಕಾರಿ ಅಧಿಕಾರಿಗಳು ತಪಾಸಣೆ ನಡೆಸಿದಾಗ, ಮಾರಾಟಕ್ಕಾಗಿ ಸಂಗ್ರಹಿಸಿಟ್ಟಿದ್ದ 49 ಲೀಟರ್ ಕಳ್ಳಭಟ್ಟಿ ಸರಾಯಿ ಪತ್ತೆಯಾಗಿದೆ. ಅಧಿಕಾರಿಗಳು ಮದ್ಯವನ್ನು ಸ್ಥಳದಲ್ಲೇ ಜಪ್ತಿ ಮಾಡಿಕೊಂಡು, ಆರೋಪಿತ ಶಂಭು ಭರಮಾ ಗಸ್ತಿ ಅವರನ್ನು ಬಂಧಿಸಿದ್ದಾರೆ.
ಈ ಕುರಿತು ರಾಯಬಾಗ ವಲಯದ ಅಬಕಾರಿ ಅಧಿಕಾರಿಗಳು ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 32(1)ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದ ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಜಿಲ್ಲೆಯ ಅಬಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು. ವಶಪಡಿಸಿಕೊಂಡ ಮುದ್ದೆಮಾಲಿನ ಅಂದಾಜು ಮೌಲ್ಯ ರೂ.24,000 ಎಂದು ಅಬಕಾರಿ ಇಲಾಖೆ ತಿಳಿಸಿದೆ.









