ಬೈಲಹೊಂಗಲ : ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ 31 ವರ್ಷದ ಮಹಿಳೆಯೊಬ್ಬರನ್ನು ಕಲ್ಲಿನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಅಮಟೂರು–ನಯಾನಗರ ಸಂಪರ್ಕಿಸುವ ಕಚ್ಚಾ ರಸ್ತೆಯ ಪಕ್ಕದ ಪೊದೆಗಳಲ್ಲಿ ಮೃತದೇಹ ಪತ್ತೆಯಾಗಿದೆ. ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮೂಡಿದೆ.
ಪೊಲೀಸರ ಪ್ರಾಥಮಿಕ ಮಾಹಿತಿಯಂತೆ, ಮೃತ ಮಹಿಳೆಯನ್ನು ಲಕ್ಷ್ಮೀ ರಾಜು ಮಾಡಮಗೇರಿ (31) ಎಂದು ಗುರುತಿಸಲಾಗಿದ್ದು, ಅವರು ಬೈಲಹೊಂಗಲದ ಗೊಲ್ಲರ ಓಣಿಯಲ್ಲಿ ವಾಸವಾಗಿದ್ದರು.
ಮಹಿಳೆಯ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ ಬಳಿಕ ಮೃತದೇಹವನ್ನು ರಸ್ತೆಯ ಬದಿಯ ಪೊದೆಗಳಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಬೈಲಹೊಂಗಲ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಸಿಪಿಐ ಪ್ರಮೋದ್ ಯಲಿಗಾರ ಹಾಗೂ ಪಿಎಸ್‌ಐ ವಾಹಿದ್ ಯಾದವ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿದ್ದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಪ್ರಕರಣದ ತನಿಖೆ ಆರಂಭಿಸಲಾಗಿದೆ.
ಮಹಿಳೆಯ ಹತ್ಯೆಗೆ ನಿಖರ ಕಾರಣವೇನು ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಹತ್ಯೆಯ ಹಿಂದಿನ ಕಾರಣ, ಶಂಕಿತ ವ್ಯಕ್ತಿಗಳು ಹಾಗೂ ಘಟನೆಗೆ ಸಂಬಂಧಿಸಿದ ಇತರ ಅಂಶಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಆರೋಪಿಗಳ ಪತ್ತೆಗಾಗಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಲಭ್ಯವಿರುವ ಸಾಕ್ಷ್ಯಗಳು ಹಾಗೂ ಮಾಹಿತಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.
ಇದೇ ವೇಳೆ, ಸಮಾಜ ಸೇವಕ ಮಲ್ಲಿಕಾರ್ಜುನ ಗಾಣಿಗೇರ ಅವರು ಮೃತದೇಹವನ್ನು ಸ್ಥಳಾಂತರಿಸಲು ಪೊಲೀಸರಿಗೆ ನೆರವಾದರು ಎಂದು ತಿಳಿದುಬಂದಿದೆ.
ಈ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

